ಆಗ ಆ ಮಗುವಿಗೆ ಇನ್ನೂ ಒಂದೇ ವರ್ಷ. ಪೋಲಿಯೋ ಆಕ್ರಮಿಸಿಬಿಟ್ಟಿತು. ಮುಂದೆ ಆಕೆಯ ಭವಿಷ್ಯಚಕ್ರ, ಚಕ್ರಗಳ ಮೇಲಿನ ಕುರ್ಚಿಯ ಮೇಗಡೆಗೆ ವಿಧಿತವಾಗಿಬಿಟ್ಟಿತು. ಆದರೆ ಅವರು 300ಕ್ಕೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪದಕಗಳನ್ನು ಗೆದ್ದರು. ಅವುಗಳಲ್ಲಿ ಸ್ವರ್ಣ ಪದಕ ಕೂಡಾ ಒಂದು. ಅವರೇ ಮಾಲತಿ, ಕೃಷ್ಣಮೂರ್ತಿ ಹೊಳ್ಳ.. == ಜೀವನ == ಮಾಲತಿ ಅವರು ಹುಟ್ಟಿದ್ದು ಜುಲೈ ೬, ೧೯೫೮ರ ವರ್ಷದಲ್ಲಿ. ಅವರಿಗೆ ಪೋಲಿಯೋ ಆಕ್ರಮಿಸಿದ ನಂತರದಲ್ಲಿ ಅವರು ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಹದಿನೈದು ವರ್ಷಗಳ ಕಾಲ ಚನ್ನೈನಲ್ಲಿ ಮೂಳೆ ಚಿಕಿತ್ಸಾಲಯಗಳಿಗೆ ಅಲೆದಿದ್ದಾರೆ. ೩೨ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. == ಡಿಫರೆಂಟ್ ಸ್ಪಿರಿಟ್ == ನಾವು ಒಂದು ಸಣ್ಣ ನೋವಾದರೂ, ‘ಅಯ್ಯೋ ದೇವರೇ, ಇದಕ್ಕೆ ಬಿಡುಗಡೆಯೇ ಇಲ್ಲವೇ, ನನಗೇ ಯಾಕೆ ಈ ಶಿಕ್ಷೆ ಎನ್ನುತ್ತೇವಲ್ಲವೇ?” ಮಾಲತಿ ಅವರು ಉತ್ತರಗಳನ್ನು ಅರಸಿದವರು. ಪ್ರಶ್ನೆಗಳ ಹಿಂದೆ ಹೋದವರಲ್ಲ. ಅವರು ತಮ್ಮ ನೋವುಗಳ ನಿವಾರಣೆಗೆ ಔಷದಿಗಳಿಗೆ ಪರ್ಯಾಯವಾಗಿ ಕ್ರೀಡೆಯನ್ನು ಬಳಸಲು ನಿರ್ಧರಿಸಿದರು. ಹಾಗಂದ್ರೆ ಏನು? ಕ್ರೀಡೆಯಲ್ಲಿ ಭಾಗವಹಿಸೋದು ಅಂದ್ರೆ ದೈಹಿಕವಾಗಿ ಕಷ್ಟ ಆಗೋಲ್ವಾ? ಅವರು ತಮ್ಮ ಬದುಕನ್ನೇ ಒಂದು ಅನುಭಾವ ಮಾಡಿಕೊಂಡವರು. ಹಾಗಾಗಿ ಈ ವಿಚಾರವನ್ನು ಮನಮುಟ್ಟುವಂತೆ ಹೇಳುತ್ತಾರೆ: “ಬದುಕಿನಲ್ಲಿ ಯಶಸ್ಸಿನ ಹಾದಿ ಸಿಗಬೇಕಾದ್ರೆ ಸಾಕಷ್ಟು ಶ್ರಮ ಪಡಬೇಕು. ನಮ್ಮ ದೇಹಕ್ಕೆ ಸಿಗುವ ಪ್ರತಿಯೊಂದು ಕಷ್ಟವೂ ನಮ್ಮನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತೆ. ಹಾಗಾಗಿಯೇ ದೈಹಿಕ ಅಸಮರ್ಥತೆಯ ನಡುವೆಯೂ ನಾನು ಕ್ರೀಡೆಯನ್ನು ಆಯ್ಕೆಮಾಡಿಕೊಂಡೆ” ಅಂತ. ಅವರು ನಮ್ಮಂತೆ ಸಾಮಾನ್ಯರಲ್ಲ ಹಾಗಾಗಿಯೇ ಅವರ ಜೀವನ ಚರಿತ್ರೆಯ ಹೆಸರು ‘ಬೇರೆಯದೇ ಆದ ಚೈತನ್ಯ’ ಎಂದು ಕನ್ನಡದಲ್ಲಿ ಹೇಳಬಹುದಾದಂತಹ ಇಂಗ್ಲಿಷ್ ಭಾಷಾ ಕೃತಿ ‘ ’. ಈ ‘ಡಿಫ್ರೆಂಟ್ ಸ್ಪಿರಿಟ್’ ಮಾಲತಿ ಹೇಳುತ್ತಾರೆ, “ನಾನು ಪುಟ್ಟವಳಿದ್ದಾಗ, ಮನೆಯ ಹಿತ್ತಲಿನಲ್ಲಿ ಉದುರಿದ ಮಾವಿನ ಕಾಯಿಗಳನ್ನು ಅರಸಲು ಓಡುತ್ತಿದ್ದ ಮಕ್ಕಳಲ್ಲಿ ನಾನೇ ಮೊದಲಿಗಳಾಗಬೇಕೆಂದು ಬಯಸುತ್ತಿದ್ದೆ. ಹಕ್ಕಿಗಳಂತೆ ಭಯವಿಲ್ಲದೆ ಒಂದೆಡೆಯಿಂದ ಮತ್ತೊಂದೆಡೆಗೆ ಹಾರಬೇಕೆಂಬುದು ನನ್ನ ಆಸೆ ಆಗಿತ್ತು. ಬೆಳೆದು ದೊಡ್ಡವಳಾಗುತ್ತಿದ್ದಂತೆ ‘ಓ ನಾನು ಓಡಬೇಕಾದಲ್ಲಿ ನನಗೆ ಕಾಲುಗಳಿರಬೇಕಿತ್ತು, ಹಾರಬೇಕಾದರೆ ರೆಕ್ಕೆಗಳಿರಬೇಕಿತ್ತು ಎಂಬ ಸತ್ಯ ಅರಿವಿಗೆ ಬಂತು. ನೋವನುಂಡೆ, ಆದರೆ ಬಿಟ್ಟುಬಿಡಲಿಲ್ಲ. ನನಗೆ ತಿಳಿದಿತ್ತು, ಒಂದು ದಿನ, ನಾನು ಓಡಿಯೇ ಓಡ್ತೀನಿ ಅಂತ...” == ಕಾಮನಬಿಲ್ಲು ಚಲನಚಿತ್ರ == ಡಾ. ರಾಜ್‍ಕುಮಾರ್ ರೊಂದಿಗೆ ಕಾಮನಬಿಲ್ಲು ಚಲನಚಿತ್ರದಲ್ಲಿ ನಟಿಸಿದ್ದು ಮಾಲತಿಯವರ ಹೆಗ್ಗಳಿಕೆ. == ಕೀಳರಿಮೆಯೇ ಅಂಗವಿಕಲತೆ == ಮಾಲತಿ ಹೊಳ್ಳ ಅವರು ಹೇಳುತ್ತಾರೆ “ದೇಹದ ಅಂಗದಲ್ಲುಂಟಾಗುವ ವಿಕಲತೆಗಿಂತ ನಮ್ಮಲ್ಲಿರುವ ಕೀಳರಿಮೆಯೇ ದೊಡ್ಡ ಅಂಗವಿಕಲತೆ” ಅಂತ. ಅವರು ಇನ್ನೂ ಹೇಳ್ತಾರೆ, “ನಾವೆಲ್ಲಾ ವಿಭಿನ್ನರು ನಿಜ. ಅಂತೆಯೇ, ನಮ್ಮ ಬದುಕು ಕೂಡಾ ವಿಭಿನ್ನತೆಯಲ್ಲಿ ಹೊಳೆಯುವ ಉದಾಹರಣೆಯಾಗಿ ಕಂಗೊಳಿಸಬೇಕು” ಅಂತ . == ಕರುಣೆ ಬೇಡ == ಈ ಸಮಾಜದಲ್ಲಿರುವ ಅಸಮಾನತೆಗಳ ಅಟ್ಟಹಾಸದ ಕಾರಣದಿಂದಾಗಿ ಅಂಗವಿಕಲರು ಬಹಳ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಯನ್ನು ಹೇಳುವ ಮಾಲತಿ ಹೊಳ್ಳ ಅವರು “ನಮಗೆ ಬೇಕಿರುವುದು ಈ ಸಮಾಜದ ಕರುಣೆ ಅಲ್ಲ, ನಾವೂ ಸಾಧಿಸಬಲ್ಲೆವು ಎಂದು ಸಿದ್ಧಪಡಿಸಿ ತೋರಿಸುವುದಕ್ಕೆ ಬೇಕಾದ ಸಹಾನುಭೂತಿ ಮಾತ್ರ” ಎಂಬುದನ್ನು ಖಡಾಖಂಡಿತವಾಗಿ ಹೇಳುತ್ತಾರೆ. == ಮಾತೃ ಫೌಂಡೆಶನ್ == ಮಾಲತಿ ಹೊಳ್ಳ ಅವರು ಬರೀ ಕ್ರೀಡಾಪಟು ಮಾತ್ರವಲ್ಲ. ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಹುದ್ದೆ ನಿರ್ವಹಿಸ್ತಾ ಇದ್ದಾರೆ. ಇದೆಲ್ಲದಕ್ಕಿಂತ ಮಹತ್ತಾದ ಕೆಲಸವಾಗಿ “ಮಾತೃ ಫೌಂಡೇಶನ್” ಅಂತ ಪ್ರಾರಂಭ ಮಾಡಿ ಅಂಗವಿಕಲ ಮಕ್ಕಳಿಗೆ ಆಶ್ರಯಕೊಟ್ಟು ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡಲಿಕ್ಕೆ ಪಣತೊಟ್ಟಿದ್ದಾರೆ. “ಗ್ರಾಮೀಣ ಪ್ರದೇಶಗಳಲ್ಲಿ ಅಂಗವಿಕಲತೆಯಿಂದ ಬಳಲುತ್ತಾ ವೈದ್ಯಕೀಯ ಸಹಾಯಗಳಿಲ್ಲದೆ ಸೊರಗುತ್ತಿರುವ ಮಕ್ಕಳಿಗೆ ಆಶ್ರಯ ಮತ್ತು ಬೆಂಬಲ ನೀಡೋದು ನನ್ನ ಗುರಿ” ಅಂತಾರೆ ಈ ವಿಶಾಲ ಹೃದಯಿ ಮಾಲತಿ ಹೊಳ್ಳ ಅವರು. == ಆತ್ಮಚರಿತ್ರೆಯ ಅಂತರಂಗದಲ್ಲಿ == ಅವರ ಪುಸ್ತಕದಲ್ಲಿ ಅವರು ಅಂಗವಿಕಲರಾದಾಗ ಭಾವನೆಗಳನ್ನು ಸರಿಯಾಗಿ ಅರ್ಥೈಸದಿದ್ದ ಹಿರಿಯರು, ಭಾರತದಲ್ಲಿ ಅಂಗವಿಕಲರಿಗೆ ಸರಿಯಾಗಿ ಸಿಗದ ವೈದ್ಯಕೀಯ ಶುಶ್ರೂಷೆ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುವ ಹಲವಾರು ವಿಷಯಗಳಿವೆ. .. ಎಂಬುದು ಅವರ ಪುಸ್ತಕದ ಕುರಿತಾದ ಲಿಂಕ್. == ಪ್ರಶಸ್ತಿ ಗೌರವಗಳು == ಮಾಲತಿ ಹೊಳ್ಳ ಅವರು ಆತ್ಮ ವಿಶ್ವಾಸ ಕಳೆದುಕೊಳ್ಳದೆ ಬದುಕಿನಲ್ಲಿ ಸಾಧನೆಗೈದು ಪದ್ಮಶ್ರೀ, ಅರ್ಜುನ, ಏಕಲವ್ಯ ಪ್ರಶಸ್ತಿಗಳು, ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಗಣ್ಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ. == ಮಾಹಿತಿ ಕೃಪೆ == ://../